ಜನಜಾಗೃತಿ ವಾಯ್ಸ್: ಬೆಂಗಳೂರು (ಸೆಪ್ಟೆಂಬರ್ 29) : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯನ್ನು ಗುರಿಯಾಗಿಸಿ ಅಶ್ಲೀಲ ಸಂದೇಶದ ಪೋಸ್ಟ್ ಹಾಕಿ ಅತ್ಯಾಚಾರದ ಬೆದರಿಕೆವೊಡ್ಡಿದ ಆರೋಪದಡಿ ನಟ ದರ್ಶನ್ ಅಭಿಮಾನಿಗಳು ಎನ್ನಲಾದವರು ಸೇರಿ ಕೆಲವರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಚಶೀಲನಗರದ ನಿವಾಸಿ ಅಜಿತ್ ಆನಂದ ಹೆಗಡೆ ಎಂಬುವವರು ನೀಡಿದ ದೂರಿನ ಮೇರೆಗೆ ಖದರ್ ಕನ್ನಡಿಗ ಫೇಸ್‌ಬುಕ್ ಪೇಜ್, ನವೀನ್ ನವೀನ್, ಹರೀಶ್ ನಾಯ್ಕ್, ಕೆಂಚ ತೂಗುದೀಪ, ಭೀಮ್ಸ್ ಬೋಸಾಯಮ್, ಮಾಕ್ಸ್‌ವೆಲ್ ಗೌತಮ್, ರವಿ ದರ್ಶನ್, ಪ್ರವೀನ್ ಶೆಟ್ಟಿ, ಇಡ್ಲಿ ಸೋಮ, ರಮೇಶ್ ನಾಗಪ್ಪ ಹಾಗೂ ಶಿವು ತೂಗುದೀಪ ಹೆಸರಿನ ಫೇಸ್‌ಬುಕ್ ಪೇಜ್‌ಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖದರ್ ಕನ್ನಡಿಗ ಸೇರಿ ಹಲವು ಪೇಜ್ ವಿರುದ್ಧ ದೂರು
ಅಜಿತ್ ಆನಂದ್ ಹೆಗಡೆ ನೀಡಿದ ದೂರಿನನ್ವಯ, ಸೆಪ್ಟೆಂಬರ್ 24 ರಂದು ಫೇಸ್‌ಬುಕ್‌ನಲ್ಲಿ ತನ್ನ ಪತ್ನಿಯನ್ನು ಟಾರ್ಗೆಟ್ ಮಾಡಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಖದರ್ ಕನ್ನಡಿಗರ ಪೇಜ್‌ನಿಂದ ಅಶ್ಲೀಲ ಫೋಸ್ಟ್ ಮಾಡಲಾಗಿದೆ. ತಮ್ಮ ಎರಡು ವರ್ಷದ ಮಗುವಿನ ಫೋಟೋ ಬಳಸಿಕೊಂಡು ಕಿಡಿಗೇಡಿಗಳು ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ನನಗೆ ಮತ್ತು ಸರ್ಕಾರಿ ಶಾಲೆ ಶಿಕ್ಷಕಿಯಾಗಿರುವ ನನ್ನ ಪತ್ನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಪತ್ನಿ ಗಣತಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಅತ್ಯಾಚಾರದ ಬೆದರಿಕೆಯಿಂದ ನನ್ನ ಕುಟುಂಬ ಆತಂಕದಲ್ಲಿದೆ, ಹೀಗಾಗಿ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.