ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಲು ಪ್ರೋತ್ಸಾಹಿಸಿ: ಡಾ. ಅಂಬರೀಶ್ ಜೀ

ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಲು ಪ್ರೋತ್ಸಾಹಿಸಿ: ಡಾ. ಅಂಬರೀಶ್ ಜೀ

ಆರೋಗ್ಯದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು — ಆಯುಧಪೂಜೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಉಡುಗೊರೆ, ಸಿಹಿ ವಿತರಣೆ

ಜನಜಾಗೃತಿ ವಾಯ್ಸ್ ವಿಜಯಪುರ: ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಮೂಲಕ ಅವರು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೋತ್ಸಾಹಿಸಬೇಕು. ಜೊತೆಗೆ ತಮ್ಮ ಆರೋಗ್ಯದ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಮಾಜ ಸೇವಕ ಡಾ. ಅಂಬರೀಶ್ ಜೀ ಕಿವಿಮಾತು ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಆಯುಧಪೂಜೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಉಡುಗೊರೆ ಕಿಟ್ ಹಾಗೂ ಸಿಹಿ ವಿತರಿಸಿ ಅವರು ಮಾತನಾಡಿದರು.

ನಗರದ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ವಿವಿಧ ಪ್ರದೇಶಗಳನ್ನು ಸ್ವಚ್ಛವಾಗಿಡುವ ಮೂಲಕ ಜನರ ಆರೋಗ್ಯ ಕಾಪಾಡುವ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪೌರಕಾರ್ಮಿಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಪ್ರತಿನಿತ್ಯ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರ ಸೇವೆಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು ಎಂದು ಅಂಬರೀಶ್ ಜೀ ಹೇಳಿದರು.

ಪೌರಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಅಗತ್ಯವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕು. ಶಿಕ್ಷಣವೇ ಕುಟುಂಬದ ಹಾಗೂ ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿದ್ದು, ಪೌರಕಾರ್ಮಿಕರ ಮಕ್ಕಳು ಕೂಡ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ದಸರಾ ಹಬ್ಬದ ಅಂಗವಾಗಿ ಪುರಸಭೆಯ ಜೆಸಿಬಿ, ಟ್ರಾಕ್ಟರ್, ಟಿಪ್ಪರ್ ಸೇರಿದಂತೆ ಕಸ ಸಾಗಿಸುವ ವಾಹನಗಳನ್ನು ಸ್ವಚ್ಛಗೊಳಿಸಿ, ಪುರಸಭೆ ಆವರಣ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ಪಂಪ್ ಹೌಸ್ ಬಳಿ ವಾಹನಗಳನ್ನು ನಿಲ್ಲಿಸಿ ಹೂವುಗಳಿಂದ ಅಲಂಕರಿಸಲಾಯಿತು. ಬಳಿಕ ಸಂಪ್ರದಾಯಬದ್ಧವಾಗಿ ಆಯುಧಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ. ಅಂಬರೀಶ್ ಜೀ ಅವರು ಪುರಸಭೆಯ ಪೌರಕಾರ್ಮಿಕರು, ಜಲಗಾರರು ಹಾಗೂ ಪುರಸಭೆಯ ಸಿಬ್ಬಂದಿಗೆ ಉಡುಗೊರೆ ಕಿಟ್ ಮತ್ತು ಸಿಹಿ ವಿತರಿಸಿ, ದಸರಾ ಹಬ್ಬದ ಶುಭಾಶಯಗಳನ್ನು ಕೋರಿದರು.

ಪೌರಕಾರ್ಮಿಕರ ಸೇವೆಯನ್ನು ಗೌರವಿಸುವ ಹಾಗೂ ಅವರೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಪುರಸಭೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *