ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಆನೆ ಗಾಬರಿ: ಬೆಳ್ಳಿ ಅಂಬಾರಿ ನೆಲಕ್ಕೆ ಬಿತ್ತು! ಜನರು ದಿಕ್ಕಾಪಾಲು!

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಆನೆ ಗಾಬರಿ!

650 ಕೆ.ಜಿ. ಬೆಳ್ಳಿ ಅಂಬಾರಿ ನೆಲಕ್ಕೆ ಬಿದ್ದಿದೆ ; ಜನರಲ್ಲಿ ಆತಂಕ — ವಾಹನಗಳಿಗೆ ಹಾನಿ ಶಂಕೆ, ಜಂಬೂಸವಾರಿ ಸ್ಥಗಿತ.!

ಜನಜಾಗೃತಿ ವಾಯ್ಸ್ ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿಯ ವೇಳೆ ಆನೆಯೊಂದು ಜನಸಂದಣಿಯಿಂದ ಗಾಬರಿಗೊಂಡು ಓಡಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಮೊದಲ ಬಾರಿಗೆ ಸುಮಾರು 650 ಕೆ.ಜಿ. ತೂಕದ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ, ಜಂಬೂಸವಾರಿಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಕಂಡು ಗಾಬರಿಗೊಂಡಿದೆ ಎನ್ನಲಾಗಿದೆ. ಏಕಾಏಕಿ ಆನೆ ಓಡಲು ಆರಂಭಿಸಿದ ಪರಿಣಾಮ ಜಂಬೂಸವಾರಿಯನ್ನು ವೀಕ್ಷಿಸುತ್ತಿದ್ದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿ, ಹಲವರು ಸುರಕ್ಷತೆಗಾಗಿ ದಿಕ್ಕಾಪಾಲಾಗಿ ಓಡಿದರೆಂದು ತಿಳಿದುಬಂದಿದೆ.

ಆನೆ ಗಾಬರಿಗೊಂಡು ಓಡಿದ ಸಂದರ್ಭದಲ್ಲಿ ಅದರ ಮಾರ್ಗದಲ್ಲಿದ್ದ ಕೆಲವು ವಾಹನಗಳು ಜಖಂಗೊಂಡಿವೆ ಎನ್ನಲಾಗಿದ್ದು, ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದೇ ವೇಳೆ ಆನೆ ಹೊತ್ತಿದ್ದ ಸುಮಾರು 650 ಕೆ.ಜಿ. ತೂಕದ ಬೆಳ್ಳಿ ಅಂಬಾರಿ ಕೆಳಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಬೆಳ್ಳಿ ಅಂಬಾರಿ ಕೆಳಗೆ ಬಿದ್ದ ಘಟನೆ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಂಬೂಸವಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಸಂದರ್ಭದಲ್ಲಿ ಯಾರಿಗಾದರೂ ಗಾಯಗಳಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೆಯೇ, ಆನೆ ಗಾಬರಿಗೊಳ್ಳಲು ನಿಖರ ಕಾರಣವೇನು, ಅಂಬಾರಿ ಕೆಳಗೆ ಬೀಳಲು ಕಾರಣವಾದ ಪರಿಸ್ಥಿತಿ ಏನು ಹಾಗೂ ಘಟನೆಯಲ್ಲಿ ಎಷ್ಟು ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂಬ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ದಸರಾ ಜಂಬೂಸವಾರಿಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದ ಹಿನ್ನೆಲೆಯಲ್ಲಿ ಆನೆಯ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಇದೀಗ ಮೂಡಿವೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಘಟನೆಯ ಸಂಪೂರ್ಣ ವಿವರ, ಗಾಯಾಳುಗಳ ಮಾಹಿತಿ ಹಾಗೂ ಆನೆ ಮತ್ತು ಅಂಬಾರಿಗೆ ಉಂಟಾಗಿರುವ ಹಾನಿಯ ಕುರಿತು ಅಧಿಕೃತ ಮಾಹಿತಿ ಹೊರಬಂದ ಬಳಿಕ ಇನ್ನಷ್ಟು ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

Spread the love

Leave a Reply

Your email address will not be published. Required fields are marked *