ಜನಜಾಗೃತಿ ವಾಯ್ಸ್ : ನೆಲಮಂಗಲ ಡಿ-ಮಾರ್ಟ್ ಹಕ್ಕಿಯಲ್ಲಿ ಹುಳು ಪ್ರತ್ಯಕ್ಷ ; ಪ್ರಶ್ನಿಸಿದ ಗ್ರಾಹಕನಿಗೆ ‘ಏನ್ ಮಾಡ್ಕೊಳ್ತಿಯೋ ಮಾಡ್ಕೋ’ ಎಂದು ಧಮ್ಕಿ!?

ನೆಲಮಂಗಲ: ಹೆಸರಾಂತ ಸೂಪರ್ ಮಾರ್ಕೆಟ್ ಸರಣಿ ‘ಡಿ-ಮಾರ್ಟ್’ (D-Mart) ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆಯೇ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ನೆಲಮಂಗಲದ ಶಾಖೆಯಲ್ಲಿ ಬೆಳಕಿಗೆ ಬಂದಿದೆ. ಡಿ-ಮಾರ್ಟ್ನಲ್ಲಿ ಖರೀದಿಸಿದ ಸೋನಾ ಮಸೂರಿ ಅಕ್ಕಿಯಲ್ಲಿ ಹುಳಗಳು ಪತ್ತೆಯಾಗಿದ್ದು, ಇದನ್ನು ಪ್ರಶ್ನಿಸಲು ಹೋದ ಗ್ರಾಹಕನಿಗೆ ಸ್ಟೋರ್ ಮ್ಯಾನೇಜ್ಮೆಂಟ್ ಅತ್ಯಂತ ಬೇಜವಾಬ್ದಾರಿಯಿಂದ ಮತ್ತು ಅಸಭ್ಯವಾಗಿ ಉತ್ತರಿಸಿರುವ ಘಟನೆ ನಡೆದಿದೆ.

ನೆಲಮಂಗಲದ ನಿವಾಸಿಯಾದ ಪವನ್ ಎಂಬುವವರು ಇಲ್ಲಿನ ಡಿ-ಮಾರ್ಟ್ ಶಾಖೆಗೆ ತೆರಳಿ ಸೋನಾ ಮಸೂರಿ ಅಕ್ಕಿಯನ್ನು ಖರೀದಿ ಮಾಡಿದ್ದರು. ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ನಂಬಿಕೆಯಿಂದ ಅಕ್ಕಿ ಮೂಟೆಯನ್ನು ಮನೆಗೆ ತಂದಿದ್ದಾರೆ. ಆದರೆ, ಮನೆಗೆ ತಂದು ಅಕ್ಕಿ ಚೀಲವನ್ನು ತೆರೆದು ನೋಡಿದಾಗ ಪವನ್ ಅವರಿಗೆ ತೀವ್ರ ಆಘಾತ ಕಾದಿತ್ತು. ಇಡೀ ಅಕ್ಕಿ ಚೀಲದಲ್ಲಿ ಹುಳಗಳು ರಾರಾಜಿಸುತ್ತಿದ್ದವು.

ಮ್ಯಾನೇಜ್ಮೆಂಟ್ ಉದ್ಧಟತನ – ‘ಏನಾಗುತ್ತೋ ಮಾಡ್ಕೋ’ ಎಂದು ಧಮ್ಕಿ:
ಅಕ್ಕಿಯಲ್ಲಿ ಹುಳ ಇರುವುದನ್ನು ಗಮನಿಸಿದ ತಕ್ಷಣ ಪವನ್ ಅವರು ತಡಮಾಡದೆ ನೆಲಮಂಗಲದ ಡಿ-ಮಾರ್ಟ್ ಸ್ಟೋರ್ಗೆ ವಾಪಸ್ ಬಂದು ಮ್ಯಾನೇಜ್ಮೆಂಟ್ ಸೂಪರ್ವೈಸರ್ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ಆಹಾರ ಧಾನ್ಯ ನೀಡುವುದು ಸಂಸ್ಥೆಯ ಕರ್ತವ್ಯ. ಆದರೆ, ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಬೇಕಾಗಿದ್ದ ಡಿ-ಮಾರ್ಟ್ ಸ್ಟೋರ್ ಮ್ಯಾನೇಜ್ಮೆಂಟ್, ಗ್ರಾಹಕ ಪವನ್ ಅವರೊಂದಿಗೆ ಅತ್ಯಂತ ಅಸಡ್ಡೆ ಮತ್ತು ಉದ್ಧಟತನದಿಂದ ವರ್ತಿಸಿದೆ.
”ನಿನ್ನ ಕೈಯಲ್ಲಿ ಏನಾಗುತ್ತೋ ಮಾಡ್ಕೋ…” ಎಂದು ಸ್ಟೋರ್ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆ ಎನ್ನಲಾಗಿದೆ.
ಸುದ್ದಿಯ ಮುಖ್ಯಾಂಶಗಳು.
- ಹುಳುಯುಕ್ತ ಅಕ್ಕಿ ಮಾರಾಟ: ನೆಲಮಂಗಲದ ಡಿ-ಮಾರ್ಟ್ನಲ್ಲಿ ಪವನ್ ಎಂಬ ಗ್ರಾಹಕರು ಖರೀದಿಸಿದ ಸೋನಾ ಮಸೂರಿ ಅಕ್ಕಿ ಚೀಲದಲ್ಲಿ ಅಪಾರ ಪ್ರಮಾಣದ ಹುಳಗಳು ಪತ್ತೆ.
- ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟ: ಬ್ರಾಂಡೆಡ್ ಮತ್ತು ದೊಡ್ಡ ಮಾಲ್ಗಳಲ್ಲೇ ಇಂತಹ ಕಳಪೆ ಹಾಗೂ ಹುಳು ಹಿಡಿದ ಧಾನ್ಯಗಳನ್ನು ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
- ಸ್ಟೋರ್ ಮ್ಯಾನೇಜ್ಮೆಂಟ್ ದರ್ಪ: ಅಕ್ಕಿ ಬದಲಾಯಿಸಿಕೊಡುವ ಅಥವಾ ಗ್ರಾಹಕರಿಗೆ ನ್ಯಾಯ ಒದಗಿಸುವ ಬದಲು, “ನಿನ್ನ ಕೈಯಲ್ಲಿ ಏನಾಗುತ್ತೋ ಮಾಡ್ಕೋ” ಎಂದು ಅಸಡ್ಡೆಯಿಂದ ಸವಾಲು ಹಾಕಿದ ಡಿ-ಮಾರ್ಟ್ ಸಿಬ್ಬಂದಿ.
- ಸಾರ್ವಜನಿಕರ ಆಕ್ರೋಶ: ಗ್ರಾಹಕರ ದುಡ್ಡಿಗೆ ಬೆಲೆಯೂ ಇಲ್ಲ, ಇವರ ಆರೋಗ್ಯದ ಬಗ್ಗೆ ಕಾಳಜಿಯೂ ಇಲ್ಲ ಎನ್ನುವಂತಾಗಿದೆ ಡಿ-ಮಾರ್ಟ್ ವರ್ತನೆ. ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣ ನೆಲಮಂಗಲ ಡಿ-ಮಾರ್ಟ್ ಮೇಲೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಹಕರ ಗಮನಕ್ಕೆ: ಮಾಲ್ಗಳಲ್ಲಿ ಆಫರ್ಗಳ ಹೆಸರಿನಲ್ಲಿ ಹಳೇ ಸ್ಟಾಕ್ ಅಥವಾ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಗ್ರಾಹಕರಿಗೆ ಅಂಟಿಸುವ ಸಾಧ್ಯತೆ ಹೆಚ್ಚಿರುತ್ತದೆ. ಖರೀದಿಸುವ ಮುನ್ನ ಎಚ್ಚರ ವಹಿಸಿ.
