ಜನಜಾಗೃತಿ ವಾಯ್ಸ್ : ಖಾಕಿ ಜಗತ್ತಿಗೆ ಕದಡಿದ ಕಳಂಕ: ಜೈಪುರದಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬೆಂಗಳೂರಿನ ಹೆಚ್‌ಎಎಲ್ ಪೊಲೀಸರು!
ಬೆಂಗಳೂರು/ಜೈಪುರ: ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಲು ರಾಜಸ್ಥಾನಕ್ಕೆ ತೆರಳಿದ್ದ ಬೆಂಗಳೂರಿನ ಹೆಚ್.ಎ.ಎಲ್ (HAL) ಪೊಲೀಸ್ ಠಾಣೆಯ ಸಿಬ್ಬಂದಿಗಳು, ಅಲ್ಲಿ ಅಂತರರಾಜ್ಯ ಸುಲಿಗೆಕೋರರಂತೆ ವರ್ತಿಸಿ ಕೊನೆಗೆ ರಾಜಸ್ಥಾನದ ಎಸಿಬಿ (ACB) ಬಲೆಗೆ ಬಿದ್ದಿರುವ ನಾಚಿಕೆಗೇಡಿನ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಇಲಾಖೆಯಲ್ಲಿರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೂ ಕೂಡ ಸಾರ್ವಜನಿಕರ ಅನುಮಾನದ ದೃಷ್ಟಿಗೆ ಗುರಿಯಾಗುವಂತಾಗಿದೆ.
ಘಟನೆಯ ಹಿನ್ನೆಲೆ:
ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ತನಿಖೆಗಾಗಿ ಮತ್ತು ಆರೋಪಿಯನ್ನು ಬಂಧಿಸಲು ಹೆಚ್.ಎ.ಎಲ್ ಠಾಣೆಯ ಮೂವರು ಸಿಬ್ಬಂದಿಗಳ ತಂಡ ಕಳೆದ ಶುಕ್ರವಾರ ರಾಜಸ್ಥಾನದ ಜೈಪುರಕ್ಕೆ ತೆರಳಿತ್ತು.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ: ಆರೋಪಿಗೆ ಡಿಮ್ಯಾಂಡ್!
ಜೈಪುರದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಬೆಂಗಳೂರು ಪೊಲೀಸರು, ಆತನನ್ನು ಬಂಧಿಸದಿರಲು ಅಥವಾ ಕೇಸ್‌ನಿಂದ ಪಾರು ಮಾಡಲು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರ ಈ ಧನದಾಹ ಮತ್ತು ಸುಲಿಗೆ ಮನೋಭಾವದಿಂದ ಬೇಸತ್ತ ಆರೋಪಿ, ತಕ್ಷಣವೇ ರಾಜಸ್ಥಾನದ ಭ್ರಷ್ಟಾಚಾರ ನಿರೋಧಕ ದಳದ (ACB) ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದಾನೆ.
ರಾಜಸ್ಥಾನ ಎಸಿಬಿ ಹೆಣೆದ ತಂತ್ರ; ಸಿಕ್ಕಿಬಿದ್ದ ‘ಖಾಕಿ’ ಖದೀಮರು:
ದೂರು ಸ್ವೀಕರಿಸಿದ ರಾಜಸ್ಥಾನ ಎಸಿಬಿ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಪಕ್ಕಾ ಸ್ಕೆಚ್ ಹಾಕಿದ್ದಾರೆ. ಆರೋಪಿಯಿಂದ ಬೆಂಗಳೂರು ಪೊಲೀಸರು ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ದಾಳಿ ನಡೆಸಿ, ರೆಡ್‌ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದ್ದಾರೆ.
ಬಂಧಿತ ಬೆಂಗಳೂರು ಪೊಲೀಸ್ ಸಿಬ್ಬಂದಿಗಳು:
ಪಿಎಸ್‌ಐ (PSI) ಅನಿತಾ
ಹೆಡ್ ಕಾನ್ಸ್‌ಟೇಬಲ್ ಉಳುವಪ್ಪ
ಕಾನ್ಸ್‌ಟೇಬಲ್ ಯತೀಶ್
ಪ್ರಸ್ತುತ ಸ್ಥಿತಿ: ಸದ್ಯ ಈ ಮೂವರೂ ಪೊಲೀಸ್ ಸಿಬ್ಬಂದಿಗಳನ್ನು ರಾಜಸ್ಥಾನದ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಾಮಾಣಿಕ ಅಧಿಕಾರಿಗಳಿಗೂ ತಟ್ಟಿದ ಕಳಂಕದ ಬಿಸಿ
ಕರ್ತವ್ಯದ ಹೆಸರಿನಲ್ಲಿ ಬೇರೆ ರಾಜ್ಯಕ್ಕೆ ಹೋಗಿ, ಅಲ್ಲಿ ಕಾನೂನು ಪಾಲಿಸಬೇಕಾದವರೇ ಕಾನೂನು ಬಾಹಿರವಾಗಿ ಸುಲಿಗೆಗೆ ಇಳಿದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಗಲಿರುಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಎಷ್ಟೋ ಪೊಲೀಸರ ಹೆಸರಿಗೂ ಇಂತಹ ಕೆಲವು ಭ್ರಷ್ಟ ಸಿಬ್ಬಂದಿಗಳಿಂದಾಗಿ ಮಸಿ ಬಳಿಯುವಂತಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದ ಈ ಸಿಬ್ಬಂದಿಗಳ ವಿರುದ್ಧ ಇಲಾಖೆಯ ಉನ್ನತ ಅಧಿಕಾರಿಗಳು ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
