ಜನಜಾಗೃತಿ ವಾಯ್ಸ್ : ಬ್ಯಾಡರಹಳ್ಳಿಯಲ್ಲಿ ಖಾಕಿ ಪಡೆ ದಿಢೀರ್ ರೂಟ್ ಮಾರ್ಚ್: ಪುಂಡ-ಪೋಕರಿಗಳಿಗೆ ನೂತನ ಇನ್ಸ್‌ಪೆಕ್ಟರ್ ಖಡಕ್ ವಾರ್ನಿಂಗ್!

ಜನಜಾಗೃತಿ ವಾಯ್ಸ್ : ಬ್ಯಾಡರಹಳ್ಳಿಯಲ್ಲಿ ಖಾಕಿ ಪಡೆ ದಿಢೀರ್ ರೂಟ್ ಮಾರ್ಚ್: ಪುಂಡ-ಪೋಕರಿಗಳಿಗೆ ನೂತನ ಇನ್ಸ್‌ಪೆಕ್ಟರ್ ಖಡಕ್ ವಾರ್ನಿಂಗ್!

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಢೀ‌ರ್ ಪೊಲೀಸ್‌ ಸೈರನ್ ಸೌಂಡ್ ಕೇಳಿಬಂದಿದ್ದು, ಸ್ಥಳೀಯ ಪುಂಡರ ಹಾವಳಿಗೆ ಬ್ರೇಕ್ ಹಾಕಲು ಹೊಸ ಇನ್ಸ್‌ಪೆಕ್ಟರ್ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಪಥಸಂಚಲನ

ಬ್ಯಾಡರಹಳ್ಳಿಯ ನೂತನ ಇನ್ಸ್‌ಪೆಕ್ಟ‌ರ್ ಗೋವಿಂದರಾಜು ನೇತೃತ್ವದಲ್ಲಿ ಈ ವಿಶೇಷ ರೂಟ್ ಮಾರ್ಚ್ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಏರಿಯಾದಲ್ಲಿ ಪುಂಡ-ಪೋಕರಿಗಳ ಕಾಟ ಹಾಗೂ ಅಡ್ಡಾದಿಡ್ಡಿ ಸುತ್ತಾಡುವವರ ಹಾವಳಿ ತುಸು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ “ಇನ್ನೇನಾದ್ರೂ ಬಾಲ ಬಿಚ್ಚಿದ್ರೆ ಜೈಲು ಗ್ಯಾರಂಟಿ” ಅನ್ನೋ ನೇರ ಎಚ್ಚರಿಕೆಯನ್ನು ಪೊಲೀಸರು ಈ ಮಾರ್ಚ್ ಮೂಲಕ ರೌಡಿ ಎಲಿಮೆಂಟ್ಸ್‌ಗೆ ನೀಡಿದ್ದಾರೆ. ಶನಿವಾರ ರಾತ್ರಿ ಬ್ಯಾಡರಹಳ್ಳಿಯ ಪ್ರಮುಖ ರಸ್ತೆ ಹಾಗೂ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಸೈರನ್ ಮೊಳಗಿಸುತ್ತಾ ಖಡಕ್ ಆಗಿ ಹೆಜ್ಜೆ ಹಾಕಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ, ರೌಡಿಶೀಟರ್‌ಗಳಿಗೆ ವಾರ್ನಿಂಗ್

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯ, ಅಂದ್ರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.

ವಾಹನಗಳ ಪರಿಶೀಲನೆ: ಕೇವಲ ವಾಕ್ ಮಾಡುವುದಷ್ಟೇ ಅಲ್ಲದೇ, ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಬಾರ್‌ಗಳ ಮೇಲೆ ದಾಳಿ: ಸ್ಥಳೀಯ ಬಾರ್ ಅಂಡ್‌ ರೆಸ್ಟೋರೆಂಟ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಖಾಕಿ ಪಡೆ, ರೌಡಿ ಶೀಟರ್‌ಗಳನ್ನು ತಡೆದು ತಪಾಸಣೆ ನಡೆಸಿತು.

ಲಾಠಿ ರುಚಿಯ ಮುನ್ಸೂಚನೆ: ಅನಗತ್ಯವಾಗಿ ರಸ್ತೆ ಬದಿಯಲ್ಲಿ ಕುಳಿತು ಗಲಾಟೆ ಮಾಡುವವರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡುವ ಮುನ್ಸೂಚನೆ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟ‌ರ್ ಗೋವಿಂದರಾಜು ಜೊತೆಗೆ ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಗಳ ದೊಡ್ಡ ಪಡೆಯೇ ಪಾಲ್ಗೊಂಡಿತ್ತು.

ಸ್ಥಳೀಯರಿಂದ ಭರಪೂರ ಮೆಚ್ಚುಗೆ

ವೀಕೆಂಡ್‌ನಲ್ಲಿ ಪೊಲೀಸರು ನಡೆಸಿದ ಈ ಅನಿರೀಕ್ಷಿತ ‘ಹಂಟಿಂಗ್ ಆಪರೇಷನ್’ಗೆ ಬ್ಯಾಡರಹಳ್ಳಿ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪುಂಡರ ಸದ್ದಡಗಿಸಲು ಮತ್ತು ಶಾಂತಿ ಕಾಪಾಡಲು ಇಂತಹ ಖಡಕ್ ಆಪರೇಷನ್‌ಗಳು ವಾರಕ್ಕೊಮ್ಮೆಯಾದರೂ ನಡೆಯಬೇಕು ಎಂದು ಸ್ಥಳೀಯ ನಿವಾಸಿಗಳು ಆಶಿಸುತ್ತಿದ್ದಾರೆ.

ವರದಿ: ಮನೋಹರ್ ರಾಮಯ್ಯ _ ಸಂಪಾದಕರು

Spread the love

Leave a Reply

Your email address will not be published. Required fields are marked *