ಜನಜಾಗೃತಿ ವಾಯ್ಸ್ : ಬೆಸ್ಕಾಂ ದೊಡ್ಡ ತಿಮಿಂಗಿಲ ಲೋಕಾಯುಕ್ತ ಬಲೆಗೆ: 15 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ AEE ಬಸವರಾಜಯ್ಯ!
ಬೆಂಗಳೂರು: ರಾಜಧಾನಿಯಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಬೆಸ್ಕಾಂ ಬಿಲ್ ದಂಡದ ಮೊತ್ತ ಕಡಿಮೆ ಮಾಡಲು ಬರೋಬ್ಬರಿ 15 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ರಾಜಾಜಿನಗರ ಬೆಸ್ಕಾಂ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಬಸವರಾಜಯ್ಯ ಎಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಎಲೆಕ್ಟ್ರಿಕ್ ಸಿಟಿ ಬಿಲ್‌ನಲ್ಲಿ ಬಂದಿದ್ದ ದಂಡದ ಮೊತ್ತವನ್ನು ಕಡಿಮೆ ಮಾಡಿಕೊಡಲು ಎಇಇ ಬಸವರಾಜಯ್ಯ ಗ್ರಾಹಕರಿಂದ ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದನು. ದಂಡ ಕಡಿತಗೊಳಿಸುವ ಆಮಿಷ ಒಡ್ಡಿ ಒಟ್ಟು 18 ಲಕ್ಷ ರೂಪಾಯಿ ಲಂಚ ನೀಡುವಂತೆ ಪಟ್ಟು ಹಿಡಿದಿದ್ದನು. ಕೊನೆಗೆ 15 ಲಕ್ಷ ರೂಪಾಯಿಗೆ ಡೀಲ್ ಕುದುರಿತ್ತು ಎನ್ನಲಾಗಿದೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿ:
ಲಂಚದ ಹಣ ಕೈಸೇರುವ ಮುನ್ನವೇ ನೊಂದ ಗ್ರಾಹಕರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯ ಪ್ರಕಾರ, ಶನಿವಾರ ಆರೋಪಿ ಬಸವರಾಜಯ್ಯ ಗ್ರಾಹಕನಿಂದ 15 ಲಕ್ಷ ರೂಪಾಯಿ ನಗದು ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಆರೋಪಿಯನ್ನು ಸ್ಥಳದಲ್ಲೇ ತಡೆದು, ಜಪ್ತಿ ಪ್ರಕ್ರಿಯೆ ನಡೆಸಿದ್ದಾರೆ.
ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ಯಶಸ್ವಿ ದಾಳಿ
ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ಖುದ್ದು ನೇತೃತ್ವದಲ್ಲಿ ಈ ಇಡೀ ಕಾರ್ಯಾಚರಣೆ ನಡೆದಿದೆ. ದಾಳಿಯ ವೇಳೆ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿ ಬಸವರಾಜಯ್ಯನನ್ನು ವಶಕ್ಕೆ ಪಡೆದಿರುವ ಪೊಲೀಸರು, 15 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಯ ಅಕ್ರಮ ಆಸ್ತಿಪಾಸ್ತಿ ಹಾಗೂ ಈ ಜಾಲದಲ್ಲಿ ಭಾಗಿಯಾಗಿರುವ ಇತರರ ಕುರಿತು ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಈ ಭರ್ಜರಿ ಕಾರ್ಯಾಚರಣೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
