“ನನ್ನ ತಂಟೆಗೆ ಬಂದರೆ ಬುಡಕ್ಕೆ ಕೈ ಇಡ್ತೀನಿ..!” – ಸಂಸದ ಡಾ. ಕೆ. ಸುಧಾಕರ್ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಗುಡುಗು.!

ಜನಜಾಗೃತಿ ವಾಯ್ಸ್ : “ನನ್ನ ತಂಟೆಗೆ ಬಂದರೆ ಬುಡಕ್ಕೆ ಕೈ ಇಡ್ತೀನಿ..!” – ಸಂಸದ ಡಾ. ಕೆ. ಸುಧಾಕರ್ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಗುಡುಗು.!

ಚಿಕ್ಕಬಳ್ಳಾಪುರ ಬಿಜೆಪಿ ಟಿಕೆಟ್ ವಿಚಾರಕ್ಕೆ ಹೊಸ ತಿರುವು – ಸಂದೀಪ್ ರೆಡ್ಡಿಗೆ ಬೆಂಬಲ ಘೋಷಣೆ; ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ವಿಶ್ವನಾಥ್.

ಜನಜಾಗೃತಿ ವಾಯ್ಸ್  ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ಬಿಜೆಪಿ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನನ್ನ ತಂಟೆಗೆ ಬಂದರೆ ಅವರ ಬುಡಕ್ಕೆ ಕೈ ಇಡ್ತೀನಿ. ಇಂದು ನಾನು ಇಲ್ಲಿಗೆ ಬಂದಿರುವುದೇ ಅದಕ್ಕಾಗಿಯೇ” ಎಂದು ನೇರ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಂದೀಪ್ ರೆಡ್ಡಿ ಅವರಿಗೆ ಅವಕಾಶ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿಯುತ್ತಿರುವ ಯುವ ನಾಯಕರಿಗೆ ಸೂಕ್ತ ಗೌರವ ಸಿಗಬೇಕು. ಆ ನಿಟ್ಟಿನಲ್ಲಿ ಸಂದೀಪ್ ರೆಡ್ಡಿ ಶಾಸಕರಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.

ಇದೇ ವೇಳೆ, ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ದಾಖಲೆಯ ಮುನ್ನಡೆ ತಂದುಕೊಟ್ಟಿದ್ದರೂ ತಮ್ಮ ವಿರುದ್ಧವೇ ಪಿತೂರಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪಕ್ಷದ ಒಳಗಿನ ಬೆಳವಣಿಗೆಗಳ ಕುರಿತು ಅಸಮಾಧಾನ ಹೊರಹಾಕಿದರು.

ಆದರೆ, ಬಿಜೆಪಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಿದರೂ ಅವರ ಪರವಾಗಿ ಸಂಪೂರ್ಣ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಾವು ಎಂದಿಗೂ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹೇಳಿಕೆಯಿಂದ ಚಿಕ್ಕಬಳ್ಳಾಪುರ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಒಳರಾಜಕೀಯ ಮತ್ತಷ್ಟು ಕಾವು ಪಡೆಯುವ ಸಾಧ್ಯತೆಗಳು ಕಾಣಿಸುತ್ತಿವೆ.

Spread the love

Leave a Reply

Your email address will not be published. Required fields are marked *