ಜನಜಾಗೃತಿ ವಾಯ್ಸ್ : ಕೋಟಿ ಕೋಟಿ ಬೆಲೆಯ ಸಾರ್ವಜನಿಕ ಆಸ್ತಿ ಲೂಟಿ. ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತ.
ಸರ್ಕಾರಿ ಜಮೀನಿನಲ್ಲಿ ಅಕ್ರಮ ಇಟ್ಟಿಗೆ ಫ್ಯಾಕ್ಟರಿ, ಅಕ್ರಮ ಬೃಹತ್ ಕಟ್ಟಡಗಳು.!

ಚಿಕ್ಕಬಳ್ಳಾಪುರ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಹಿತ ಕಾಯಬೇಕಾದ ಸರ್ಕಾರಗಳು ಮತ್ತು ಅಧಿಕಾರಿಗಳು ಸಾರ್ವಜನಿಕ ಆಸ್ತಿ ರಕ್ಷಣೆಯಲ್ಲಿ ಎಷ್ಟರಮಟ್ಟಿಗೆ ವಿಫಲವಾಗುತ್ತಿದ್ದಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಒಂದು ಜ್ವಲಂತ ಉದಾಹರಣೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಸಬಾ ಹೋಬಳಿಯ ಕೋಟಹಳ್ಳಿ ಗ್ರಾಮದ ಸರ್ವೆ ನಂಬರ್ 68 ರ ಸರ್ಕಾರಿ ಜಮೀನಿನಲ್ಲಿ ಅಕ್ರಮ ಕಟ್ಟಡಗಳು, ಇಟ್ಟಿಗೆ ಫ್ಯಾಕ್ಟರಿಗಳು ತಲೆಎತ್ತಿದ್ದರೂ ಸಹಾ ಅಧಿಕಾರಿಗಳು ಕಂಡು ಕಾಣದಂತೆ ಜಾಣಕುರುಡರಾಗಿದ್ದಾರೆ.

ಒಂದೆಡೆ ಬಡವರು, ದಲಿತರು ಮತ್ತು ಭೂ ರಹಿತರು ಸಾಗುವಳಿ ಚೀಟಿಗಾಗಿ, ಹಕ್ಕುಪತ್ರಕ್ಕಾಗಿ ನಮೂನೆ 50, 53 ರ ಅಡಿಯಲ್ಲಿ ಅರ್ಜಿ ಹಾಕಿ ವರ್ಷಗಟ್ಟಲೆಯಿಂದ ಕಾಯುತ್ತಿದ್ದಾರೆ. ದರಖಾಸ್ತು ಕಮಿಟಿಗಳು ರಚನೆಯಾಗದ ಕಾರಣ ಬಡ ರೈತನಿಗೆ ಸಾಗುವಳಿ ಚೀಟಿ ಸಿಗುವುದು ಇಂದಿಗೂ ಕನಸಾಗಿಯೇ ಉಳಿದಿದೆ. ಆದರೆ, ಮತ್ತೊಂದೆಡೆ ವ್ಯವಸ್ಥೆಯ ಮೂಗಿನ ನೇರಕ್ಕೆ ಪ್ರಭಾವಿ ವ್ಯಕ್ತಿಗಳು ಎಕರೆಗಟ್ಟಲೆ ಸರ್ಕಾರಿ ಭೂಮಿಯನ್ನು ನುಂಗಿ ನೀರು ಕುಡಿಯುತ್ತಿದ್ದಾರೆ.

ಕೋಟಹಳ್ಳಿ ಗ್ರಾಮದಲ್ಲಿ ಸುಮಾರು 227 ಎಕರೆ ಸರ್ಕಾರಿ ಖರಾಬು, ಗೋಮಾಳ, ಗುಂಡುತೋಪು ಹಾಗೂ ಕೆರೆ ಸೇರಿದಂತೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸಾರ್ವಜನಿಕ ಆಸ್ತಿ ಇದೆ. ಸರ್ವೇ ನಂಬರ್ 68 ರ ಸರ್ಕಾರಿ ಜಮೀನಿನಲ್ಲಿ ಯಾವುದೇ ಕಾನೂನಾತ್ಮಕ ಪರವಾನಗಿ ಇಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಅಕ್ರಮ ಇಟ್ಟಿಗೆ ಫ್ಯಾಕ್ಟರಿ ಹಾಗೂ ಕಟ್ಟಡಗಳು ತಲೆ ಎತ್ತಿವೆ. ಸಾರ್ವಜನಿಕ ಸ್ವತ್ತನ್ನು ಖಾಸಗಿಯವರು ಈ ರೀತಿ ಲೂಟಿ ಮಾಡುತ್ತಿದ್ದರೂ ಸ್ಥಳೀಯ ಆಡಳಿತ ಮತ್ತು ಕಂದಾಯ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಕೋಟಹಳ್ಳಿ ಗ್ರಾಮದ ಸರ್ವೇ ನಂಬರ್ಗಳಾದ 68, 85, 11, 2, 20, 27, 48, 41, 108 ಮತ್ತು 117 ರಲ್ಲಿ ಬೃಹತ್ ಒತ್ತುವರಿಯಾಗಿದೆ. ಕಾಂಪೌಂಡ್ ಹಾಕಿಕೊಂಡಿದ್ದಾರೆ. ಜಿಲ್ಲಾಡಳಿತದ ಕಣ್ಣೆದುರೇ ನೂರಾರು ಎಕರೆ ಭೂಮಿ ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕೋಟಹಳ್ಳಿಯ ಸರ್ವೆ ನಂಬರ್ 68. ರಲ್ಲಿರುವ ಅಕ್ರಮ ಇಟ್ಟಿಗೆ ಫ್ಯಾಕ್ಟರಿಗಳು, ಹಾಗೂ ಅಕ್ರಮ ಮಹಾ ಒತ್ತುವರಿಯ ವಿರುದ್ಧ ಕಾನೂನಿನ ಚಾವಟಿ ಬೀಸುತ್ತಾರಾ? ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಾರಾ? ಕಾದು ನೋಡಬೇಕಿದೆ.
