ಜನಜಾಗೃತಿ ವಾಯ್ಸ್ : ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ವಿಶಿಷ್ಟವಾಗಿ ಹುಟ್ಟುಹಬ್ಬದ ಶುಭಾಶಯ: ಸತತ 18ನೇ ವರ್ಷವೂ ಟಗರು ಉಡುಗೊರೆ ನೀಡಿದ ರಾಂಪಾಳ್ಯ ಮುನಿರಾಜು.

ಯಲಹಂಕ ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಬಿಎಂಪಿ/ಬಿಡಿಎ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಪಡೆದಿರುವ ಎಸ್.ಆರ್. ವಿಶ್ವನಾಥ್ ಅವರ ಹುಟ್ಟುಹಬ್ಬವನ್ನು ಈ ವರ್ಷವೂ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಅದರಲ್ಲೂ ಬಿಜೆಪಿ ದಾಸನಪುರ ಒಬಿಸಿ ಅಧ್ಯಕ್ಷರಾದ ರಾಂಪಾಳ್ಯ ಮುನಿರಾಜು ಅವರು ಕಳೆದ 18 ವರ್ಷಗಳಿಂದ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿರುವ ವಿಶಿಷ್ಟ ಸಂಪ್ರದಾಯ ಈ ಬಾರಿಯೂ ವಿಶೇಷ ಆಕರ್ಷಣೆಯಾಯಿತು.

ಕುರುಬ ಸಮುದಾಯದ ಸಂಪ್ರದಾಯ ಹಾಗೂ ಅಭಿಮಾನವನ್ನು ಪ್ರತಿಬಿಂಬಿಸುವ ರೀತಿಯಲ್ಲಿ, ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ಟಗರನ್ನು ಉಡುಗೊರೆಯಾಗಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಬಳಿಕ ಸ್ನೇಹಿತರು ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಂಪಾಳ್ಯ ಮುನಿರಾಜು ಅವರು, “ನಮ್ಮದು ಕುರುಬ ಸಮಾಜ. ಆದ್ದರಿಂದ ನಮ್ಮ ಸಮಾಜದ ಸಂಪ್ರದಾಯದಂತೆ ಪ್ರೀತಿಯ ಸಂಕೇತವಾಗಿ ಟಗರನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಎಸ್.ಆರ್. ವಿಶ್ವನಾಥ್ ಅವರು ನಮ್ಮ ಕುರುಬ ಸಮಾಜದ ಬೀಗರು ಕೂಡ ಹೌದು. ಕಳೆದ 18 ವರ್ಷಗಳಿಂದ ಈ ಸಂಪ್ರದಾಯವನ್ನು ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಸಿಕೊಂಡು ಬಂದಿದ್ದೇವೆ. ಮುಂದೆಯೂ ಇದೇ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ,” ಎಂದು ಸಂತಸ ವ್ಯಕ್ತಪಡಿಸಿದರು.
ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಅಭಿಮಾನಿಗಳು ಹಾಗೂ ಮುಖಂಡರು ಶಾಸಕ ಎಸ್.ಆರ್. ವಿಶ್ವನಾಥ್ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಜನಸೇವೆಯ ಸಾಧನೆಗಾಗಿ ಶುಭ ಹಾರೈಸಿದರು. ಕಾರ್ಯಕ್ರಮವು ಆತ್ಮೀಯತೆ, ಸ್ನೇಹಭಾವ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಸಮ್ಮಿಲನವಾಗಿ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಪವನ್, ವೆಂಕಟೇಶ್, ವಿಟ್ಟಲ್ ಕುಮಾರ್, ಮಹೇಶ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಸ್ನೇಹಿತರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
