ಜನಜಾಗೃತಿ ವಾಯ್ಸ್ : ಕರ್ನಾಟಕದ ಜೈಲುಗಳು ಅತಿಯಾದ ಜನಸಂದಣಿ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ. ಹೊಸ ಡಿಜಿಪಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ, ತಂತ್ರಜ್ಞಾನದ ಬಳಕೆ ಮತ್ತು ಸಮಗ್ರ ಸುಧಾರಣೆಗಳ ಮೂಲಕ ಈ ವ್ಯವಸ್ಥೆಯನ್ನು ಬದಲಾಯಿಸುವ ಸಾಧ್ಯತೆಗಳನ್ನು ಈ ಲೇಖನ ಪರಿಶೀಲಿಸುತ್ತದೆ.
ನಮ್ಮ ಜೈಲುಗಳು ತಪ್ಪು ಮಾಡಿರುವ ವ್ಯಕ್ತಿಗಳಿಗೆ ಜೀವನದಲ್ಲಿ ಸುಧಾರಣೆ ಹೊಂದಲು ಒಂದು ಎರಡನೇ ಅವಕಾಶ ಕಲ್ಪಿಸುವ ತಾಣವಾಗಿರಬೇಕಿತ್ತು. ಅಲ್ಲಿ ಖೈದಿಗಳು ಹೊಸ ಕೌಶಲಗಳನ್ನು ಕಲಿತುಕೊಂಡು, ಹೊರಗೆ ಬರುವಾಗ ಉತ್ತಮ ಪ್ರಜೆಗಳಾಗಿ ಬದಲಾಗಬೇಕಿತ್ತು. ಆದರೆ ಇಂದು, ಕರ್ನಾಟಕದ ಜೈಲುಗಳು ಮೂಲ ಉದ್ದೇಶಗಳಿಂದ ಸಂಪೂರ್ಣ ಭಿನ್ನವಾಗಿವೆ. ಸುಧಾರಣಾ ಕೇಂದ್ರಗಳಾಗುವ ಬದಲಾಗಿ, ರಾಜ್ಯದ ಜೈಲುಗಳು ಮುಕ್ತವಾಗಿ ಮಾದಕ ದ್ರವ್ಯಗಳು ಸಂಚರಿಸುವ, ಭಯೋತ್ಪಾದಕರು ಮತ್ತು ಭೂಗತ ಪಾತಕಿಗಳಿಗೆ ಫೋನ್ಗಳು ಲಭಿಸುವ, ಅತ್ಯಾಚಾರಿಗಳು ಕಂಬಿಯ ಹಿಂದಿನಿಂದಲೇ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುವ ತಾಣಗಳಾಗಿವೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ನಮ್ಮ ಜೈಲು ವ್ಯವಸ್ಥೆಯಲ್ಲಿ ಇರುವ ಎಲ್ಲ ಸಮಸ್ಯೆಗಳನ್ನೂ ತೆರೆದಿಟ್ಟಿವೆ. ಕೇವಲ ಒಂದು ತಿಂಗಳ ಹಿಂದೆ, ಜೈಲಿನ ಅಧಿಕಾರಿಗಳು ನಡೆಸಿದ ಹಠಾತ್ ದಾಳಿಯಲ್ಲಿ 15 ಮೊಬೈಲ್ ಫೋನ್ಗಳು, 11 ಸಿಮ್ ಕಾರ್ಡ್ಗಳು, ಚಾರ್ಜರ್ಗಳು, ಮತ್ತು ಇಯರ್ ಬಡ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಂದು ಇದು ಒಂದು ಬಾರಿಯ ಸಮಸ್ಯೆಯೇನಲ್ಲ. ನವೆಂಬರ್ 2025ರಲ್ಲಿ, ಓರ್ವ ಐಸಿಸ್ಗೆ ನೇಮಕಾತಿ ನಡೆಸುವಾತ, ಉಮೇಶ್ ರೆಡ್ಡಿ ಎಂಬ ಸರಣಿ ಅತ್ಯಾಚಾರಿ, ಮತ್ತು ತೆಲುಗು ನಟ ತರುಣ್ ತಮ್ಮ ಜೈಲಿನ ಕೋಣೆಗಳಲ್ಲೇ ಮುಕ್ತವಾಗಿ ಫೋನ್ ಬಳಸುವ, ಟಿವಿ ನೋಡುವ ವೀಡಿಯೋಗಳು ಹರಿದಾಡಿದ್ದವು. ಈ ಹಿಂದೆ, ನಟ ದರ್ಶನ್ ಜೈಲಿನ ಕೋಣೆಯಲ್ಲೂ ಆರಾಮಾಗಿ ಸಿಗರೆಟ್ ಸೇದುತ್ತಾ, ಹೋಟೆಲ್ ಕೋಣೆಯಲ್ಲಿರುವಂತೆ ಆರಾಮಾಗಿದ್ದ ದೃಶ್ಯಗಳು ಎಲ್ಲರಿಗೂ ಆಘಾತ ಉಂಟುಮಾಡಿದ್ದವು.
ಅತಿದೊಡ್ಡ ಸಮಸ್ಯೆಯೆಂದರೆ, ಭಾರತದ ಜೈಲುಗಳು ಈಗ ಅಕ್ರಮ ವಸ್ತುಗಳಿಗೆ ಮಾರುಕಟ್ಟೆಗಳಾಗಿವೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿರುವ ಆಮಿರ್ ಖಾನ್ ಎಂಬ ಓರ್ವ ಮಾದಕ ದ್ರವ್ಯಗಳ ಪೂರೈಕೆದಾರ ಕಳ್ಳ ಸಾಗಣೆ ಮಾಡಿರುವ ಮೊಬೈಲ್ ಫೋನ್ ಬಳಸಿಕೊಂಡು, ತನ್ನ ಸಂಪೂರ್ಣ ಡ್ರಗ್ ಜಾಲವನ್ನು ನಿರ್ವಹಿಸುತ್ತಿದ್ದ. ಆತನ ಸಹಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖರೀದಿ ಆದೇಶ ತೆಗೆದುಕೊಂಡು, 71 ಲಕ್ಷ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ಪೂರೈಸಿದ್ದಾರೆ. ಆತನ ಫೋನನ್ನು ಪತ್ತೆಹಚ್ಚಲು ಪೊಲೀಸರು ಜೈಲಿನಲ್ಲಿ ದಾಳಿ ಮಾಡಿದರೂ, ಅವರಿಗೆ ಏನನ್ನೂ ಪತ್ತೆಹಚ್ಚಲಾಗಲಿಲ್ಲ. ಇದು ಜೈಲಿನೊಳಗೆ ನಿಷಿದ್ಧ ವಸ್ತುಗಳನ್ನು ಎಷ್ಟು ಸುಲಭವಾಗಿ ಬಚ್ಚಿಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಕಾರವಾರ ಜಿಲ್ಲಾ ಕಾರಾಗೃಹದಲ್ಲಿ, ಜೈಲರ್ ಮೊಬೈಲ್ ಫೋನ್ ಮತ್ತು ಮಾದಕ ದ್ರವ್ಯಗಳು ಜೈಲಿನೊಳಗೆ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿದ್ದಕ್ಕೆ ಇಬ್ಬರು ಖೈದಿಗಳು ಜೈಲರ್ ಮತ್ತು ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದರು. ಖೈದಿಗಳು ತಮ್ಮ ಜೀವನದಲ್ಲಿ ಶಿಸ್ತು ಮೂಡಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳ ಮೇಲೇ ಹಲ್ಲೆ ನಡೆಸುತ್ತಿದ್ದಾರೆಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ? ಕಾರಾಗೃಹಗಳ ನಿಯಂತ್ರಣದ ಕುರಿತು ಈ ಬೆಳವಣಿಗೆ ಸೂಚಿಸುವುದೇನು?
ಜೈಲಿನ ಗೋಡೆಗಳನ್ನು ದಾಟಿರುವ ಮೂಲಭೂತ ಸಮಸ್ಯೆಗಳು
ಕರ್ನಾಟಕದಲ್ಲಿ 54 ಜೈಲುಗಳಿದ್ದು, ಅಲ್ಲಿ 12,000 ಖೈದಿಗಳನ್ನು ಇಡಲು ಅವಕಾಶವಿದೆ. ಆದರೆ, ಈ ಜೈಲುಗಳೊಳಗೆ 18,000ಕ್ಕೂ ಹೆಚ್ಚಿನ ಖೈದಿಗಳನ್ನು ಇಡಲಾಗಿದೆ. ಕೇವಲ 4,244 ಖೈದಿಗಳಿಗೆ ನಿರ್ಮಿಸಲಾಗಿರುವ ಪರಪ್ಪನ ಅಗ್ರಹಾರದಲ್ಲೇ 5,000ಕ್ಕೂ ಹೆಚ್ಚಿನ ಖೈದಿಗಳಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹ ಎಷ್ಟು ನಿಬಿಡವಾಗಿದೆ ಎಂದರೆ, ಅಲ್ಲಿ ಸುತ್ತಮುತ್ತ ನಡೆದಾಡಲೂ ಕಷ್ಟಕರ ಪರಿಸ್ಥಿತಿಯಿದೆ.
ಆದರೆ, ಅತಿಯಾದ ಜನ ತುಂಬಿರುವುದು ಮೂಲಭೂತ ಸಮಸ್ಯೆಗಳಲ್ಲಿ ಒಂದಷ್ಟೇ. ಬಹುತೇಕ ಕಾರಾಗೃಹಗಳಲ್ಲಿ ಖೈದಿಗಳ ಸಾಗಾಣಿಕೆಗೆ ಬೇಕಾದಷ್ಟು ವಾಹನಗಳಿಲ್ಲ, ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದರೆ ಅವರನ್ನು ಸಾಗಿಸುವ, ನ್ಯಾಯಾಲಯಕ್ಕೆ ಕರೆದೊಯ್ಯುವ ವ್ಯವಸ್ಥೆಗಳಿಲ್ಲ. ಯಾರಾದರೂ ಖೈದಿಗೆ ತುರ್ತು ಚಿಕಿತ್ಸೆ ಬೇಕಾದರೆ, ಆಂಬ್ಯುಲೆನ್ಸ್ ಕೊರತೆಯ ಕಾರಣದಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸುವುದು ಕಷ್ಟಕರವಾಗುತ್ತದೆ. ಖೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಬೇಕಾದರೂ ಜೈಲುಗಳಲ್ಲಿ ಸೀಮಿತ ಸಂಖ್ಯೆಯ ವಾಹನಗಳು ಇರುವುದರಿಂದ ನ್ಯಾಯ ಲಭಿಸುವುದೂ ವಿಳಂಬವಾಗುತ್ತದೆ.
ಜೈಲುಗಳು ಹೀಗೆ ಮಿತಿಮೀರಿ ತುಂಬಿದಾಗ, ಸಿಬ್ಬಂದಿಗಳಿಗೆ ಎಲ್ಲರ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈಗ ಕೇವಲ 400 ಸಿಬ್ಬಂದಿಗಳು ಪರಪ್ಪನ ಅಗ್ರಹಾರದಲ್ಲಿ 5,000ಕ್ಕೂ ಹೆಚ್ಚು ಖೈದಿಗಳನ್ನು ನಿರ್ವಹಿಸುತ್ತಿದ್ದಾರೆ. ಅಂದರೆ, ಜೈಲಿನ ಪ್ರತಿ ಅಧಿಕಾರಿಯೂ ತಲಾ 12ಕ್ಕೂ ಹೆಚ್ಚು ಖೈದಿಗಳ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಇಂತಹ ಗಂಭೀರ ಕೊರತೆಯ ನಡುವೆ ಸಿಬ್ಬಂದಿಗಳು ಸಿಬ್ಬಂದಿಗಳು ಹೇಗೆ ಭದ್ರತೆಯನ್ನು ನಿರ್ವಹಿಸಲು ಸಾಧ್ಯ? ಈ ಕಾರಣದಿಂದಲೇ ಇಷ್ಟೊಂದು ದಾಳಿಗಳು ನಡೆದರೂ ಫೋನ್ಗಳು ಮತ್ತು ಮಾದಕ ವಸ್ತುಗಳು ಜೈಲಿನೊಳಗೆ ಬರುತ್ತಲೇ ಇರುತ್ತವೆ.
ಕರ್ನಾಟಕದ ಬಹುತೇಕ ಖೈದಿಗಳು, ಅಂದರೆ, 70%ಕ್ಕೂ ಹೆಚ್ಚು ಜನರು ಇನ್ನೂ ವಿಚಾರಣೆಗೆ ಒಳಗಾಗಿಲ್ಲ, ಅಪರಾದಿಗಳೆಂದು ಘೋಷಿತರೂ ಆಗಿಲ್ಲ. ಅವರಿನ್ನೂ ತಮ್ಮ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಕೆಲವು ಬಡ ಜನರು ಜಾಮೀನಿಗೆ ಹಣ ಹೊಂದಿಸಲು ಸಾಧ್ಯವಾಗದೆ, ಸಣ್ಣ ಪುಟ್ಟ ಅಪರಾಧಗಳಿಗೆ ವರ್ಷಾನುಗಟ್ಟಲೆ ಜೈಲಿನಲ್ಲೇ ಕಳೆಯುತ್ತಾರೆ. ಈ ಸಮಯದಲ್ಲಿ ಅವರು ಜೈಲಿನೊಳಗಿರುವ ದೊಡ್ಡ ಅಪರಾಧಿಗಳೊಡನೆ ಸೇರಿ, ಅಪರಾಧಗಳನ್ನು ನಡೆಸುವ ಇನ್ನಷ್ಟು ಹೊಸ ವಿಧಾನಗಳನ್ನು ಕಲಿಯುತ್ತಾರೆ. ಬಳಿಕ ಜೈಲಿನಿಂದ ಹೊರ ಬರುವಾಗ ಇನ್ನಷ್ಟು ಕೆಟ್ಟವರಾಗಿಯೇ ಬರುತ್ತಾರೆ.
ಜೈಲಿನ ಒಳಗೆ ಜೀವನವಂತೂ ತೀರಾ ಕೆಟ್ಟದಾಗಿರುತ್ತದೆ. ಖೈದಿಗಳಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲ, ಶೌಚಾಲಯಗಳು ತೀರಾ ಕೊಳಕಾಗಿರುತ್ತವೆ, ಮತ್ತು ವೈದ್ಯಕೀಯ ಸೌಲಭ್ಯಗಳು ತೀರಾ ಕೆಳಮಟ್ಟದಲ್ಲಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಖೈದಿಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಜೀವಿಸಿದಾಗ, ಅವರು ವಿಪರೀತ ಕೋಪ ಮತ್ತು ಹತಾಶೆಗೆ ಒಳಗಾಗುತ್ತಾರೆ. ಇದು ಮಾದಕದ್ರವ್ಯ ಪೂರೈಕೆದಾರರು ಮತ್ತು ಗ್ಯಾಂಗ್ ಸದಸ್ಯರಿಗೆ ಅವರನ್ನು ಸೇರಿಸಿಕೊಳ್ಳಲು ಅನುಕೂಲವಾಗುತ್ತದೆ.
ಸಣ್ಣ ಅಪರಾಧಗಳಿಗೆ ಜೈಲಿನಲ್ಲಿ ಕೊಳೆಯುವುದನ್ನು ತಡೆಯಲು ಸಾಧ್ಯ.
ನಾಗರಿಕ ಸಮಾಜದ ಸಂಸ್ಥೆಗಳು, ಎನ್ಜಿಒಗಳು, ಮತ್ತು ಸ್ವಯಂಸೇವಕರನ್ನು ಜೈಲಿನೊಳಗೆ ಆಹ್ವಾನಿಸಿ, ಖೈದಿಗಳಿಗೆ ಕೌಶಲ್ಯ ತರಬೇತಿ, ಸಮಾಲೋಚನೆ, ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಉದ್ಯಮಗಳಿಗೂ ಮಾಜಿ ಖೈದಿಗಳಿಗೆ ಉದ್ಯೋಗ ನೀಡಿ, ಅವರಿಗೆ ಜೀವನದಲ್ಲಿ ಎರಡನೇ ಅವಕಾಶ ನೀಡುವಂತೆ ಪ್ರೇರೇಪಿಸಬೇಕು.
ಸೂಕ್ತ ಕ್ರಮಕ್ಕೆ ಸರಿಯಾದ ಸಮಯ
ನಮ್ಮ ಕಾರಾಗೃಹಗಳು ಅಪಾಯಕಾರಿ ವ್ಯಕ್ತಿಗಳನ್ನು ಸಮಾಜದಿಂದ ದೂರವಿಟ್ಟು, ಅವರಿಗೆ ಪರಿವರ್ತನೆಗೊಳ್ಳಲು ಇನ್ನೊಂದು ಅವಕಾಶ ನೀಡಬೇಕು. ಆದರೆ, ಇಂದು ಅವು ಇವೆರಡು ಕೆಲಸಗಳನ್ನೂ ಮಾಡುತ್ತಿಲ್ಲ. ಅಪರಾಧಿಗಳು ಇಂದಿಗೂ ಹಾಯಾಗಿ ಜೈಲಿನ ಒಳಗಿನಿಂದಲೇ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇನ್ನು ಜೈಲಿನಿಂದ ಹೊರಬರುವ ಖೈದಿಗಳು ಹೆಚ್ಚು ಅಪಾಯಕಾರಿಗಳಾಗುತ್ತಿದ್ದಾರೆ.
ಜೈಲಿನ ವಾರ್ಡನ್ಗಳು, ಸಿಬ್ಬಂದಿಗಳನ್ನು ದೂರುವುದು ಸರಿಯಾದ ನಡೆಯಲ್ಲ. ಕೆಟ್ಟದಾದ ಕೆಲಸದ ಸ್ಥಳಗಳಲ್ಲಿ ಭ್ರಷ್ಟಾಚಾರ ಹುಲುಸಾಗಿ ಬೆಳೆಯುತ್ತದೆ ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ, ನೇಮಕಾತಿಯನ್ನು ಹೆಚ್ಚಿಸಿ, ಉತ್ತಮ ಸಂಬಳ ಮತ್ತು ಸವಲತ್ತುಗಳನ್ನು ಒದಗಿಸಿ, ಮಾನವರ ತಪ್ಪುಗಳನ್ನು ತಡೆಯಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಾಗ, ಭ್ರಷ್ಟಾಚಾರ ಸಹಜವಾಗಿಯೇ ಕಡಿಮೆಯಾಗುತ್ತದೆ.
ತಂತ್ರಜ್ಞಾನ ಮತ್ತು ಮಾನವ ನಿರ್ವಹಣೆ ಎರಡನ್ನೂ ಅರ್ಥ ಮಾಡಿಕೊಂಡಿರುವ ಅಲೋಕ್ ಕುಮಾರ್ ಅವರಂತಹ ಸಮರ್ಥ ನಾಯಕರ ನೇತೃತ್ವದಲ್ಲಿ, ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿ ಸುರಕ್ಷತೆಗೆ ಸರ್ಕಾರ ಸೂಕ್ತ ಹೂಡಿಕೆ ನಡೆಸಿ, ರಾಜಕೀಯ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಿದರೆ ಆಗ ಪರಿಸ್ಥಿತಿಯನ್ನು ಸುಧಾರಿಸಬಹುದು. ನಾವು ಈ ಸುಧಾರಣೆಗಳನ್ನು ಕೈಗೊಳ್ಳಲು ಒಂದೊಂದು ದಿನ ತಡ ಮಾಡಿದಾಗಲೂ, ಹೆಚ್ಚು ಯುವ ಜನರು ಜೈಲಿನಿಂದ ಲಭಿಸುವ ಮಾದಕ ವಸ್ತುಗಳಿಗೆ ದಾಸರಾಗುತ್ತಾರೆ. ಜೈಲಿನ ಕಂಬಿಗಳ ಹಿಂದೆ ಹೆಚ್ಚಿನ ಅಪರಾಧಗಳು ಯೋಜಿತವಾಗಿ, ಹೆಚ್ಚು ಜೀವನಗಳು ನಶಿಸುತ್ತವೆ.
ಈಗ ಕರ್ನಾಟಕ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಮಗೆ ಅಪರಾಧಿಗಳನ್ನು ಶಿಕ್ಷಿಸಿ, ಅವರನ್ನು ಸುಧಾರಿಸುವ ಜೈಲುಗಳು ಬೇಕೇ? ಅಥವಾ ಅವುಗಳು ಇನ್ನಷ್ಟು ಅಪರಾಧ ನಡೆಸುವುದನ್ನು ಕಲಿಸುವಂತಿರಬೇಕೇ? ಈ ಕುರಿತ ನಿರ್ಧಾರ ನಮ್ಮದೇ. ನೂತನ ಡಿಜಿಪಿ ಈಗಾಗಲೇ ತಾನು ಕ್ರಮ ಕೈಗೊಳ್ಳಲು ಸಿದ್ಧರಾಗಿರವುದನ್ನು ಪ್ರದರ್ಶಿಸಿದ್ದಾರೆ. ಈಗ ಸರ್ಕಾರ, ನ್ಯಾಯಾಂಗ, ಮತ್ತು ಸಮಾಜ ಅವರಿಗೆ ನೈಜ ಬದಲಾವಣೆ ಬೇಕಾದ ಸಂಪನ್ಮೂಲಗಳು, ತಾಳ್ಮೆ ಮತ್ತು ಬದ್ಧತೆಯನ್ನು ಒದಗಿಸಿ ಬೆಂಬಲಿಸಬೇಕು.
