ಜನಜಾಗೃತಿ ವಾಯ್ಸ್ : ಸೊಂಡೇಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ನರಕದರ್ಶನ; ರೋಗಿಗಳಿಗೆ ಕಂಟಕವಾದ ಫಾರ್ಮಸಿ ಅಧಿಕಾರಿ ಸುಧಾಮಣಿ ಕೆ.!

ಸೊಂಡೇಕೊಪ್ಪ: ಬಡವರ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ಇಂದು ಕೆಲ ಬೇಜವಾಬ್ದಾರಿ ಸಿಬ್ಬಂದಿಗಳ ವರ್ತನೆಯಿಂದಾಗಿ ನರಕಸದೃಶವಾಗುತ್ತಿವೆ. ಇದಕ್ಕೆ ಜೀವಂತ ಸಾಕ್ಷಿ ಎಂಬಂತಿದೆ ಸೊಂಡೇಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರ. ಇಲ್ಲಿನ ಸಿಬ್ಬಂದಿಗಳ ಕರ್ತವ್ಯ ಲೋಪ, ಸಾರ್ವಜನಿಕರ ಮೇಲಿನ ಅಸಡ್ಡೆ ಹಾಗೂ ಉದ್ಧಟತನದ ವರ್ತನೆ ಇದೀಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ಕೆಲಸದ ವೇಳೆಯಲ್ಲೂ ಮೊಬೈಲ್ ವ್ಯಾಮೋಹ!
ಆಸ್ಪತ್ರೆಗೆ ಬರುವ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇಲ್ಲಿನ ಸಿಬ್ಬಂದಿಗಳು ಮಾತ್ರ ತಮ್ಮದೇ ಲೋಕದಲ್ಲಿ ತೇಲುತ್ತಿರುತ್ತಾರೆ. ಕೆಲಸದ ಅವಧಿಯಲ್ಲೇ ಮೊಬೈಲ್ ಹಿಡಿದು ಕುಳಿತುಕೊಳ್ಳುವ ಸಿಬ್ಬಂದಿಗಳಿಗೆ ರೋಗಿಗಳ ಸಂಕಷ್ಟ ಕಣ್ಣಿಗೆ ಕಾಣಿಸುತ್ತಿಲ್ಲ. ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.
ಸ್ಥಳೀಯ ಆಧಾರ್ ಕಾರ್ಡ್ ಇದ್ದರೆ ಮಾತ್ರ ಚಿಕಿತ್ಸೆ?
ಸರ್ಕಾರಿ ನಿಯಮಗಳ ಪ್ರಕಾರ ದೇಶದ ಯಾವುದೇ ನಾಗರಿಕನಿಗಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವ ಹಕ್ಕಿದೆ. ಆದರೆ, ಸೊಂಡೇಕೊಪ್ಪ ಆರೋಗ್ಯ ಕೇಂದ್ರದಲ್ಲಿ ಮಾತ್ರ ವಿಚಿತ್ರ ನಿಯಮ ಜಾರಿಯಲ್ಲಿದೆ! “ಇಲ್ಲಿನ ಸ್ಥಳೀಯ ವಿಳಾಸವಿರುವ ಆಧಾರ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಚಿಕಿತ್ಸೆ ನೀಡಲಾಗುತ್ತದೆ,” ಎಂದು ಸಿಬ್ಬಂದಿಗಳು ರೋಗಿಗಳನ್ನು ಸತಾಯಿಸುತ್ತಿದ್ದಾರೆ. ದೂರದ ಊರುಗಳಿಂದ ಬಂದ ಕೂಲಿ ಕಾರ್ಮಿಕರು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಬರುವ ರೋಗಿಗಳಿಗೆ ಇದರಿಂದ ಭಾರೀ ಅನ್ಯಾಯವಾಗುತ್ತಿದೆ.

ಫಾರ್ಮಸಿ ಅಧಿಕಾರಿ ಸುಧಾಮಣಿ ಕೆ. ಅವರ ‘ರೌಡಿ’ ವರ್ತನೆ!
ಆಸ್ಪತ್ರೆಯ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಪಡೆಯಲು ಫಾರ್ಮಸಿಗೆ ಹೋದರೆ, ಅಲ್ಲಿನ ಫಾರ್ಮಸಿ ಅಧಿಕಾರಿ ಸುಧಾಮಣಿ ಕೆ. ಅವರ ವರ್ತನೆ ಸಾರ್ವಜನಿಕರ ರಕ್ತ ಕುದಿಯುವಂತೆ ಮಾಡುತ್ತಿದೆ. ಸಾರ್ವಜನಿಕರಿಗೆ ಕನಿಷ್ಠ ಗೌರವ ನೀಡದೆ ಮಾತನಾಡುವ ಈಕೆ, “ನಿಮಗೆ ಔಷಧಿಗಳನ್ನು ನೀಡುವುದಿಲ್ಲ, ನೇರವಾಗಿ ಡಾಕ್ಟರ್‌ಗೇ ಕೊಡುತ್ತೇನೆ,” ಎಂದು ರೌಡಿಗಳಂತೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ, “ನೀವು ಏನು ಮಾಡ್ಕೊಳ್ತೀರಾ ಮಾಡ್ಕೊಳ್ಳಿ, ಯಾರಿಗೆ ಹೇಳ್ತೀರಾ ಹೇಳಿ!” ಎಂದು ಅಸಡ್ಡೆಯಿಂದ, ಜೋರು ಧ್ವನಿಯಲ್ಲಿ ಕಿರುಚಾಡಿ ಧಮಕಿ ಹಾಕುತ್ತಿದ್ದಾರೆ. ಅಧಿಕಾರಿಯ ಈ ಉದ್ಧಟತನದ ವರ್ತನೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಸಾರ್ವಜನಿಕರ ಆಕ್ರೋಶ:
“ಇಂತಹ ಬೇಜವಾಬ್ದಾರಿ ಸಿಬ್ಬಂದಿಗಳಿಂದಲೇ ಸರ್ಕಾರಿ ಆಸ್ಪತ್ರೆಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಇವರ ಕಾಟಕ್ಕೆ ಹೆದರಿ ಬಡವರು ಸರ್ಕಾರಿ ಆಸ್ಪತ್ರೆಗೆ ಬರಲು ಯೋಚಿಸುವಂತಾಗಿದೆ. ಇಂತವರನ್ನು ಗಂಟು ಮೂಟೆ ಕಟ್ಟಿಸಿ ಮನೆಗೆ ಕಳಿಸಬೇಕು.”
ತಕ್ಷಣ ಅಮಾನತು ಮಾಡಲು ಆಗ್ರಹ
ಸಾರ್ವಜನಿಕರ ಸೇವಕಿಯಾಗಿರಬೇಕಾದ ಫಾರ್ಮಸಿ ಅಧಿಕಾರಿ ಸುಧಾಮಣಿ ಕೆ. ಅವರ ಅಸಭ್ಯ ವರ್ತನೆ ಮತ್ತು ಕರ್ತವ್ಯ ಲೋಪದ ವಿರುದ್ಧ ಸೊಂಡೇಕೊಪ್ಪದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿಗಳು ಈ ಕೂಡಲೇ ಮದ್ಯಪ್ರವೇಶಿಸಿ, ಈ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತು (Suspension) ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
