ಜನಜಾಗೃತಿ ವಾಯ್ಸ್ : ಶಿಡ್ಲಘಟ್ಟ ಕಾನೂನು ಬಾಹಿರ ಬೋರ್ಡ್ ತೆರವು; ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್!
ಶಿಡ್ಲಘಟ್ಟ: ತಾಲ್ಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಅಳವಡಿಸಲಾಗಿದ್ದ ವಿವಾದಿತ ಬೋರ್ಡ್ ಒಂದನ್ನು ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಈ ವೇಳೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ ಮೂವರಿಗೆ ಪೊಲೀಸರು ಸ್ಥಳದಲ್ಲೇ ಖಡಕ್ ವಾರ್ನಿಂಗ್ ನೀಡಿರುವ ಘಟನೆ ಜುಲೈ 7ರ ಮಂಗಳವಾರ ನಡೆದಿದೆ.

ಘಟನೆಯ ಹಿನ್ನೆಲೆ:
ಕೋಟಹಳ್ಳಿ ಗ್ರಾಮದ ಸರ್ವೆ ನಂಬರ್ 28 ರ ಸರ್ಕಾರಿ ಖರಾಬು ಜಮೀನಿನಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಾಗರತ್ನಮ್ಮ ಎಂಬುವವರ ಸ್ವಾಧೀನಾನುಭವದಲ್ಲಿರುವ ಜಮೀನಿನ ಪಕ್ಕದಲ್ಲಿ ನಿಯಮಬಾಹಿರವಾಗಿ ಅಕ್ರಮ ಬೋರ್ಡ್ ಒಂದನ್ನು ಅಳವಡಿಸಲಾಗಿತ್ತು. ಈ ಕುರಿತು ನಾಗರತ್ನಮ್ಮ ಅವರು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ದೂರು ಸಲ್ಲಿಸಿ, ಬೋರ್ಡ್ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಆದರೆ, ಈ ಅಕ್ರಮ ಬೋರ್ಡ್ ಅನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು ಎಂದು ಸ್ಥಳೀಯ ಕೆಲ ಪ್ರಭಾವಿ ವ್ಯಕ್ತಿಗಳ ಗುಂಪೊಂದು ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಾ ಬಂದಿತ್ತು ಎನ್ನಲಾಗಿದೆ.

ಅಧಿಕಾರಿಗಳ ಕಾರ್ಯಾಚರಣೆ – ತೀವ್ರ ಪ್ರತಿರೋಧ:
ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರ ಕಡಕ್ ಸೂಚನೆಯ ಮೇರೆಗೆ ರಾಜಸ್ವ ನಿರೀಕ್ಷಕರು (ಆರ್.ಐ) ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಅಧಿಕಾರಿಗಳು ಅಕ್ರಮ ಬೋರ್ಡ್ ತೆರವುಗೊಳಿಸಲು ಮುಂದಾದಾಗ, ಕೋಟಹಳ್ಳಿ ಗ್ರಾಮದ ಈರೇಗೌಡ, ಬೈರೆಡ್ಡಿ ಹಾಗೂ ಕೇಶವ ಎಂಬುವವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಧಿಕಾರಿಗಳೊಂದಿಗೆ ದರ್ಪದಿಂದ ವರ್ತಿಸಿ, ಸರ್ಕಾರಿ ಕೆಲಸಕ್ಕೆ ನೇರವಾಗಿ ಅಡ್ಡಿಪಡಿಸಲು ಯತ್ನಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು, ಬಿಸಿ ಮುಟ್ಟಿಸಿದ ಖಾಕಿ:
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ರಾಜಸ್ವ ನಿರೀಕ್ಷಕರು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಾನೂನು ಕೈಗೆತ್ತಿಕೊಂಡು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದರು. ತದನಂತರ ಅಧಿಕಾರಿಗಳು ಅಕ್ರಮ ಬೋರ್ಡ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಅದನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್, ರಾಜಸ್ವ ನಿರೀಕ್ಷಕ ವೇಣುಗೋಪಾಲ್, ಗ್ರಾಮ ಆಡಳಿತಾಧಿಕಾರಿ ಶಾಹಿಸ್ತಾ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
