ಜನಜಾಗೃತಿ ವಾಯ್ಸ್ : ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ – ಖತರ್ನಾಕ್ ಗ್ಯಾಂಗ್ ಅರೆಸ್ಟ್!

ಖಾಲಿ ನಿವೇಶನ ಅಥವಾ ಜಮೀನು ಹೊಂದಿರುವ ಮಾಲೀಕರು ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸದ್ದಿಲ್ಲದೆ ಭೂಮಿ ಲಪಟಾಯಿಸುತ್ತಿದ್ದ ಬೃಹತ್ ಜಾಲವೊಂದನ್ನು ವಿಜಯಪುರ ಪೊಲೀಸರು ಬಯಲಿಗೆಳೆದಿದ್ದಾರೆ.
ಬರೋಬ್ಬರಿ 200 ಜನರ ಗ್ಯಾಂಗ್ ಸೇರಿಕೊಂಡು ಹಗಲು ದರೋಡೆಗೆ ಇಳಿದಿದೆ. ಇತ್ತೀಚಿನ ತನಿಖೆಯಲ್ಲಿ ತಿಳಿದುಬಂದಿರುವ ಸತ್ಯ ಕೇಳಿದರೆ ಬೆಚ್ಚಿಬೀಳುತ್ತೀರಿ. ಈ ಖದೀಮರ ತಂಡ ಇದುವರೆಗೆ ಬರೋಬ್ಬರಿ 158 ಎಕರೆ ಜಮೀನು ಮತ್ತು 9 ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದೆ.
ನಿರ್ಲಕ್ಷಿತರು, ಬಡವರು, ಏಕಾಂಗಿಯಾಗಿ ವಾಸಿಸುವ ವೃದ್ಧರು ಹಾಗೂ ಯಾವುದೇ ಬೆಂಬಲವಿಲ್ಲದ ಅಮಾಯಕರನ್ನೇ ಈ ಗ್ಯಾಂಗ್ ಪ್ರಮುಖವಾಗಿ ಗುರಿಯಾಗಿಸಿಕೊಂಡಿದೆ.
ಧನಸಹಾಯದ ಆಮಿಷವೊಡ್ಡಿ ಅಮಾಯಕರಿಂದ ಆಧಾರ್ ಕಾರ್ಡ್ ಪಡೆದು, ಅದರಲ್ಲಿನ ಫೋಟೋ ಅಥವಾ ಹೆಸರನ್ನು ತಿದ್ದುಪಡಿ ಮಾಡುತ್ತಿದ್ದರು. ಬಳಿಕ ಮೂಲ ಮಾಲೀಕರ ಹೆಸರಿಗೆ ತಮ್ಮ ತಂಡದವರನ್ನೇ ನಕಲಿ ವಾರಸುದಾರರನ್ನಾಗಿ ಸೃಷ್ಟಿಸಿ, ಪಹಣಿಯಲ್ಲಿ (RTC) ಹೆಸರು ಬದಲಾಯಿಸಿ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಈ ವಂಚನೆ ಜಾಲವನ್ನು ಪತ್ತೆಹಚ್ಚಿರುವ ವಿಜಯಪುರ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಇದರ ಹಿಂದೆ ಇನ್ನೂ ಹಲವು ಪ್ರಭಾವಿಗಳಿರುವ ಶಂಕೆ ವ್ಯಕ್ತವಾಗಿದೆ.
